23 Aug 2025

‘ಛಾಯಾ ನಿದರ್ಶನ’ ರಾಷ್ಟ್ರೀಯ ವಿಚಾರಗೋಷ್ಠಿ

ಉಡುಪಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕುತ್ಪಾಡಿ, ರೋಗನಿದಾನ ಮತ್ತು ವಿಕೃತಿ ವಿಜ್ಞಾನ ವಿಭಾಗವು 21/08/2025 ರಂದು ಛಾಯಾ ನಿದರ್ಶನ ವಿಷಯದ ಮೇಲೆ ರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿಯನ್ನು ಕಾಲೇಜು ಪ್ರಾಂಶುಪಾಲರಾದ ಡಾ.ಮಮತಾ ಕೆ.ವಿ ಮತ್ತು ರೋಗನಿದಾನ ವಿಭಾಗದ ಮುಖ್ಯಸ್ಥರಾದ ಡಾ. ನಾಗರಾಜ್ ಎಸ್. ರವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ಎಸ್ ಡಿ ಎಂ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಎಮೆರಿಟಸ್ ಪ್ರೊಫೆಸರ್ ಡಾ. ಮುರಳಿಧರ ಶರ್ಮಾ, ಉಪ ಪ್ರಾಂಶುಪಾಲರಾದ ಡಾ. ನಿರಂಜನ್ ರಾವ್, ಪಿ.ಜಿ. ಡೀನ್ ಡಾ. ಶ್ರೀಕಾಂತ್ ಪಿ ಮತ್ತು ರೋಗನಿದಾನ ವಿಭಾಗದ ಪ್ರಾಧ್ಯಾಪಕರಾದ ಡಾ. ಪ್ರಸನ್ನ ಎನ್ ಮೊಗಸಾಲೆಯವರು ಉಪಸ್ಥಿತರಿದ್ದರು.

ಅಧ್ಯಕ್ಷೀಯ ಭಾಷಣದಲ್ಲಿ ಡಾ. ನಿರಂಜನ್ ರಾವ್ ಅವರು ಎಕ್ಸ್-ರೇಗಳು ವೈದ್ಯಕೀಯ ಕ್ಷೇತ್ರದಲ್ಲಿ ಎಷ್ಟು ಮುಖ್ಯವೆಂಬುದರೊಂದಿಗೆ ಪ್ರಾಯೋಗಿಕ ದೃಷ್ಟಿಕೋನದಿಂದ ಅವುಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯತೆಯನ್ನು ವಿವರಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಡಾ. ಮುರಳಿಧರ ಶರ್ಮಾರವರು ‘ಚೆಸ್ಟ್ ಟು ಗಟ್ – ಎ ಪ್ರಾಕ್ಟಿಕಲ್ ಎಕ್ಸ್ -ರೇ ಅಪ್ರೋಚ್’ ಬಗ್ಗೆ ವಿವರಿಸಿದರು. ಬೆಳಗಾವಿ ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಹೇಮಲತಾ ಎಸ್ ಶೇಟ್ ಇವರು ‘ಸ್ಪೈನ್ ಟು ಸೈನೋವಿಯಂ’ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಮಣಿಪಾಲ್ ಹೆಲ್ತ್ ಮ್ಯಾಪ್‌ನ ತಾಂತ್ರಿಕ ಮತ್ತು ವೈದ್ಯಕೀಯ ಶೈಕ್ಷಣಿಕ ವಿಭಾಗದ ಮುಖ್ಯಸ್ಥರಾದ ಡಾ. ಪ್ರವೀಣ್ ಶಾಸ್ತ್ರಿಯವರು ‘ಸಿಟಿ ಬ್ರೈನ್ ಫ್ರಮ್ ಬ್ಲೀಡ್ ಟು ಬ್ಲಾಕ್ಸ್ ‘ ಕುರಿತು ತುರ್ತು ಸ್ಥಿತಿಗಳಲ್ಲಿ ಸಿ.ಟಿ. ಬ್ರೈನ್ ನ ವೀಕ್ಷಣೆ ಹೇಗೆ ಮಾಡಬೇಕು ಎಂಬುದನ್ನು ವಿವರಿಸಿದರು.

ಡಾ. ಅರುಣ್ ಕುಮಾರ್ ಎಮ್ ಸ್ವಾಗತಿಸಿ, ಡಾ. ಸರಿತಾ ಟಿ ಕಾರ್ಯಕ್ರಮದ ಸಂಕ್ಷಿಪ್ತ ವರದಿಯನ್ನು ನೀಡಿದರು ಹಾಗೂ ಡಾ ಸದಾನಂದ ಭಟ್ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧನಾ ಅಧಿಕಾರಿ, ಶ್ರೀ ನವೀನ್ ಚಂದ್ರ ಅವರು ಉಪಸ್ಥಿತರಿದ್ದರು. 100ಕ್ಕೂ ಅಧಿಕ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಭಾಗವಹಿಸಿದರು.